ಗ್ಲಾಬರ್ ಲವಣ-
ಸೋಡಿಯಮ್ ಸಲ್ಫೇಟ್ ಲವಣದ ಹರಳುಗಳು: ರಾಸಾಯನಿಕ ಅಣುಸೂತ್ರ Na2SO410H2O. ಸೋಡಿಯಮ್ ಕ್ಲೋರೈಡಿನಿಂದ ಹೈಡ್ರೊಕ್ಲೋರಿಕ್ ಆಮ್ಲವನ್ನು ತಯಾರಿಸುವ ವಿಧಾನದಲ್ಲಿ ದೊರೆಯುವ ಉಪೋತ್ಪನ್ನವಿದು. ನೈಸರ್ಗಿಕವಾಗಿ ದೊರೆಯುವ ಇದೇ ಲವಣಕ್ಕೆ ಮಿರಾಬಲೈಟ್ ಎಂದು ಹೆಸರು. ಗ್ಲಾಬರ್ ಲವಣ ಪಾರಕಗಳಾದ ದೊಡ್ಡ ಹರಳುಗಳ ರೂಪದಲ್ಲಿ ದೊರೆಯುತ್ತದೆ. ಸಣ್ಣ ಸಣ್ಣ ಸೂಜಿರೂಪದಲ್ಲಿ ಅಥವಾ ಚೂರ್ಣದ ರೂಪದಲ್ಲಿ ದೊರೆಯುವುದೂ ಉಂಟು. 330 ಸೆ.ನಲ್ಲಿ ದ್ರವಿಸುತ್ತದೆ. 1000 ಸೆಂ.ನಲ್ಲಿ ಸ್ಫಟಿಕಜಲವನ್ನು (ವಾಟರ್ ಆಫ್ ಹೈಡ್ರೇಷನ್) ಕಳೆದುಕೊಳ್ಳುತ್ತದೆ. ನೀರು ಮತ್ತು ಗ್ಲಿಸರಿನ್ನಿನಲ್ಲಿ ವಿಲೀನವಾದರೂ ಆಲ್ಕೊಹಾಲಿನಲ್ಲಿ (ಈಥೈಲ್ ಆಲ್ಕೊಹಾಲ್) ವಿಲೀನವಾಗುವುದಿಲ್ಲ. ಸಾರ ಆಮ್ಲ ಮತ್ತು ಸಾರ ಪ್ರತ್ಯಾಮ್ಲಗಳ ಸಂಯೋಗದಿಂದ ಉತ್ಪತ್ತಿಯಾಗುವ ಲವಣವಾದ್ದರಿಂದ ಜಲೀಯ ದ್ರಾವಣ ಲಿಟ್ಮಸ್ಸಿಗೆ ತಟಸ್ಥವಾಗಿರುತ್ತದೆ. ಈ ಲವಣವನ್ನು ಮುಖ್ಯವಾಗಿ ಬಟ್ಟೆಗಳಿಗೆ ಬಣ್ಣಹಾಕುವ ಉದ್ಯಮದಲ್ಲಿ ಬಳಸುತ್ತಾರೆ. ಕ್ರಾಫ್ಟ್ ಕಾಗದ, ಕಾಗದದ ರಟ್ಟು ಮತ್ತು ಗಾಜಿನ ತಯಾರಿಕೆಯಲ್ಲಿ ಚಲುವೆಕಾರಿಗಳ ಉತ್ಪಾದನೆಯಲ್ಲಿ ಸೆರಾಮಿಕ್ (ಮೃಣ್ಮಯ) ಪಾತ್ರೆಗಳಿಗೆ ಹೊಳಪು ಕೊಡುವುದರಲ್ಲಿ, ಚರ್ಮವನ್ನು ಹದಮಾಡುವುದರಲ್ಲಿ, ಔಷಧಿಗಳ ತಯಾರಿಕೆಯಲ್ಲಿ ಮತ್ತು ಘನೀಕರಣ ಮಿಶ್ರಣಗಳಲ್ಲಿ (ಫ್ರೀ ಜಿಂಗ್ ಮಿಕ್ಸ್‍ಚರ್ಸ್) ಈ ಲವಣದ ಬಳಕೆ ಉಂಟು.
(ಎಚ್.ಎಸ್.ಎಸ್.)
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ